ಜೀವನ ಕಲೆ : ವಿಪಶ್ಯನ ಧ್ಯಾನ

ಈ ಲೇಖನವು ಎಸ್ ಎನ್ ಗೋಯಂಕ ಅವರು ಬರ್ನ್, ಸ್ವಿಟ್ಝರ್ಲ್ಯಾಂಡ್ ನಲ್ಲಿ ಮಾಡಿದ ಭಾಷಣ

ಪ್ರತಿಯೊಬ್ಬರೂ ಶಾಂತಿ ಮತ್ತು ಸಾಮರಸ್ಯವನ್ನು ಹುಡುಕುತ್ತಾರೆ. ಯಾಕೆಂದರೆ, ಇವು ನಮ್ಮ ಜೀವನದಲ್ಲಿ ಇಲ್ಲವಾಗಿವೆ. ನಾವೆಲ್ಲರೂ ಆಗಾಗ ತಳಮಳ, ಕಿರಿಕಿರಿ, ಅಸಾಮರಸ್ಯ, ನೋವುಗಳನ್ನು ಅನುಭವಿಸುತ್ತೇವೆ. ನಾವು ದುಃಖಿತರಾದಾಗ, ಈ ದುಃಖವನ್ನು ನಮಗೇ ಸೀಮಿತಗೊಳಿಸಿಕೊಳ್ಳುವುದಿಲ್ಲ. ಇತರರಿಗೂ ಹಂಚುತ್ತೇವೆ. ದುಃಖಿತ ವ್ಯಕ್ತಿಯ ಸುತ್ತಮುತ್ತೆಲ್ಲ ವ್ಯಾಕುಲತೆ (ಕ್ಷೋಭೆ) ಆವರಿಸಿಕೊಳ್ಳುತ್ತದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ ಕಿರಿಕಿರಿಗೊಳಗಾಗುತ್ತಾರೆ, ತಳಮಳಕ್ಕೊಳಗಾಗುತ್ತಾರೆ. ಖಂಡಿತವಾಗಿಯೂ ಇದು ಸರಿಯಾಗಿ ಜೀವಿಸುವ ರೀತಿಯಲ್ಲ.

ವ್ಯಕ್ತಿಯು ತಾನೂ ಶಾಂತಿಯಿಂದ ಬದುಕಿ, ಇತರರೊಡನೆಯೂ ಶಾಂತಿಯಿಂದಿರಬೇಕಾಗುತ್ತದೆ. ಎಷ್ಟಾದರೂ ಮನುಷ್ಯನು ಸಮಾಜ ಜೀವಿ. ಅವನು ಸಮಾಜದಲ್ಲಿ ಬದುಕಲೇಬೇಕು ಮತ್ತು ಇತರರೊಡನೆ ವ್ಯವಹರಿಸಲೇಬೇಕು.ಶಾಂತಿಯಿಂದ ಬದುಕುವುದು ಹೇಗೆ? ನಮ್ಮೊಳಗೇ ನಾವು ಗೊಂದಲಗಳಿಲ್ಲದೇ ಶಾಂತಿಯಿಂದಿರುವುದು ಹೇಗೆ, ಮತ್ತು ನಮ್ಮ ಸುತ್ತಮುತ್ತಲೂ ಶಾಂತಿ, ಸಾಮರಸ್ಯವನ್ನು ಕಾಪಾಡಿಕೊಂಡು ಆ ಮುಖೇನ ಇತರರೂ ಶಾಂತಿ, ಸಾಮರಸ್ಯದಿಂದ ಬದುಕುವಂತೆ ಮಾಡುವುದು ಹೇಗೆ?

ನಾವು ತಳಮಳಕ್ಕೊಳಗಾದಾಗ, ಅದರಿಂದ ಹೊರಬರಲು, ಆ ತಳಮಳದ ಮೂಲ ಕಾರಣವನ್ನು, ದುಃಖದ ಕಾರಣವನ್ನು ತಿಳಿಯಲೇ ಬೇಕು. ಸಮಸ್ಯೆಯನ್ನು ತನಿಖೆ ಮಾಡಿದಾಗ, ಇದು ಬಹಳ ಬೇಗ ಸ್ಪಷ್ಟವಾಗುತ್ತದೆ. ಯಾವಾಗ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಅಥವಾ ಮಲಿನತೆಯನ್ನು ಉತ್ಪತ್ತಿ ಮಾಡಿಕೊಳ್ಳಲು ಪ್ರಾರಂಭಿಸುತ್ತೇವೆಯೋ ಆಗ ಖಂಡಿತವಾಗಿಯೂ ನಾವು ದುಃಖಿತರಾಗುತ್ತೇವೆ. ಮನಸ್ಸಿನ ನಕಾರಾತ್ಮಕತೆ, ಮನಸ್ಸಿನ ಮಲಿನತೆ ಅಥವಾ ಅಶುದ್ಧತೆ ಮತ್ತು ಶಾಂತಿ - ಸಾಮರಸ್ಯ ಎರಡೂ ಜೊತೆ ಜೊತೆಯಾಗಿರಲು ಸಾಧ್ಯವಿಲ್ಲ.

ನಾವು ನಕಾರತ್ಮಕತೆಯನ್ನು ಹೇಗೆ ಉತ್ಪತ್ತಿ ಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ? ಪರೀಕ್ಷಿಸಿ ನೋಡಿದಾಗ ಪುನಃ ಸ್ಪಷ್ಟವಾಗುತ್ತದೆ. ನಮಗೆ ಇಷ್ಟವಾಗುವಂತೆ ಯಾರಾದರೂ ನಡೆದುಕೊಳ್ಳದಿರುವುದು ಕಂಡುಬಂದರೆ, ನಮಗೆ ಇಷ್ಟವಾಗದ್ದು ನಡೆದರೆ, ಬೇಸರವಾಗುತ್ತದೆ. ನಮಗೆ ಇಷ್ಟವಾಗದ ಸಂಗತಿಗಳು ನಡೆದಾಗ, ನಾವು ನಮ್ಮಲ್ಲಿಯೇ ಉದ್ವಿಗ್ನತೆ ಉಂಟುಮಾಡಿಕೊಳ್ಳುತ್ತೇವೆ. ಇಷ್ಟವಾದ ಸಂಗತಿಗಳು ನಡೆಯುವುದಿಲ್ಲ. ಕೆಲವು ಅಡೆ ತಡೆಗಳು ಬರುತ್ತವೆ. ಪುನಃ ನಾವು ನಮ್ಮಲ್ಲಿಯೇ ಉದ್ವಿಗ್ನತೆ ಉಂಟುಮಾಡಿಕೊಳ್ಳುತ್ತೇವೆ. ನಮ್ಮಲ್ಲಿಯೇ ನಾವು ಗಂಟುಗಳನ್ನು ಕಟ್ಟಲು ಪ್ರಾರಂಭಿಸುತ್ತೇವೆ. ವ್ಯಕ್ತಿಯ ಜೀವನ ಪರ್ಯಂತ ಇಷ್ಟವಿಲ್ಲದ ಘಟನೆಗಳು ಜರುಗುತ್ತಲೇ ಇರುತ್ತವೆ. ಅಪೇಕ್ಷಿತ ಸಂಗತಿಗಳು ನಡೆಯಬಹುದು, ನಡೆಯದೇ ಇರಬಹುದು. ಇವುಗಳಿಗೆ ಪ್ರತಿಕ್ರಿಯೆ ಮಾಡುವ ಪ್ರಕ್ರಿಯೆಯಿಂದ, ಗಂಟುಕಟ್ಟುವಿಕೆಯಿಂದ, ಕಗ್ಗಂಟುಗಳ ನಿರ್ಮಾಣದಿಂದ ಇಡೀ ದೇಹ ಮತ್ತು ಮನಸ್ಸಿನ ವ್ಯವಸ್ಥೆ ಒತ್ತಡಕ್ಕೊಳಗಾಗುತ್ತದೆ. ನಕಾರಾತ್ಮಕತೆಯಿಂದ ತುಂಬುತ್ತದೆ. ಜೀವನ ದುಃಖಮಯವಾಗುತ್ತದೆ.

ಇದಕ್ಕೆ ಒಂದು ಪರಿಹಾರ ಎಂದರೆ ನಮ್ಮ ಜೀವನದಲ್ಲಿ ನಮಗಿಷ್ಟವಿಲ್ಲದ್ದು ಯಾವುದೂ ನಡೆಯದಂತೆ ವ್ಯವಸ್ಥೆ ಮಾಡುವುದು. ಮತ್ತು ನಮ್ಮಿಷ್ಟದಂತೆಯೇ ಎಲ್ಲವೂ ನಡೆಯುವಂತೆ ಮಾಡುವುದು. ನಮಗೆ ಬೇಕಾಗಿದ್ದೆಲ್ಲಾ,ನಮ್ಮಿಷ್ಟದಂತೆಯೇ ನಡೆಯುವಂತಹ ಶಕ್ತಿಯನ್ನು ನಾವು ಹೊಂದಬೇಕು ಅಥವಾ ಯಾರಿಗಾದರೂ ಅಂತಹ ಶಕ್ತಿಯಿರಬೇಕು ಮತ್ತು ನಾವು ಕೇಳಿದಾಗಲೆಲ್ಲ ಆ ವ್ಯಕ್ತಿಯು ನಮ್ಮ ನೆರವಿಗೆ ಬಂದು ನಮ್ಮಿಷ್ಟದಂತೆಯೇ ಎಲ್ಲವೂ ನಡೆಯುವಂತೆ ಮಾಡಬೇಕು. ಆದರೆ ಇದು ಸಾಧ್ಯವಾಗುವುದಿಲ್ಲ. ಯಾವಾಗಲೂ ತಾನು ಅಂದುಕೊಂಡ ಬಯಕೆಗಳು ಈಡೇರಿದ, ತನ್ನ ಜೀವನದಲ್ಲಿ ತನ್ನಿಷ್ಟದಂತೆಯೇ ಎಲ್ಲವೂ ನಡೆಯುವ, ಅಥವಾ ತನಗಿಷ್ಟವಿಲ್ಲದ್ದು ನಡೆಯದೆಯೇ ಇರುವ ವ್ಯಕ್ತಿಯು ಈ ಜಗತ್ತಿನಲ್ಲಿ ಯಾರೂ ಇಲ್ಲ. ನಮ್ಮ ಇಚ್ಛೆಗೆ ವಿರುದ್ಧವಾಗಿ, ನಮ್ಮ ಬಯಕೆಗೆ ವಿರುದ್ಧವಾಗಿ ಘಟನೆಗಳು ಘಟಿಸುತ್ತಲೇ ಇರುತ್ತವೆ. ನಮಗಿಷ್ಟವಿಲ್ಲದ ಈ ಘಟನೆಗಳಿಗೆ ಕುರುಡು ಪ್ರತಿಕ್ರಿಯೆ ಮಾಡದೇ ಇರುವುದು ಹೇಗೆ? ಉದ್ವೇಗಕ್ಕೊಳಗಾಗದೆ ಇರುವುದು ಹೇಗೆ? ಶಾಂತಿ, ಸಾಮರಸ್ಯದಿಂದ ಇರುವುದು ಹೇಗೆ?

ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿನ ಪುರಾತನ ಕಾಲದ ಬುದ್ಧಿವಂತ ಸಂತರು ಈ ಸಮಸ್ಯೆಯನ್ನು, ಮಾನವರ ದುಃಖದ ಈ ಸಮಸ್ಯೆಯನ್ನು ಅಧ್ಯಯನ ಮಾಡಿ ಪರಿಹಾರ ಕಂಡುಹಿಡಿದಿರುವರು. ಇಷ್ಟವಿಲ್ಲದ ಘಟನೆ ನಡೆದಾಗ ವ್ಯಕ್ತಿಯು ಕೋಪದಿಂದ, ಭಯದಿಂದ ಅಥವಾ ಇನ್ಯಾವುದೋ ನಕಾರಾತ್ಮಕ ಭಾವನೆಯಿಂದ ಪ್ರತಿಕ್ರಿಯಿಸುತ್ತಾನೆ. ಆ ತಕ್ಷಣ ವ್ಯಕ್ತಿಯು ತನ್ನ ಗಮನವನ್ನು ಬೇರೆಡೆಗೆ ಹರಿಸಬೇಕು. ಉದಾಹರಣೆಗೆ, ನಿಮಗೆ ಕೋಪ ಬಂದ ತಕ್ಷಣ ಎದ್ದು ಒಂದು ಲೋಟ ನೀರು ತೆಗೆದುಕೊಂಡು ಕುಡಿಯಲು ಪ್ರಾರಂಭಿಸಿ. ನಿಮ್ಮ ಕೋಪ ಗುಣಿತವಾಗುವುದಿಲ್ಲ. ನೀವು ಕೋಪದಿಂದ ಹೊರಬರುತ್ತೀರಿ. ಅಥವಾ ಒಂದು, ಎರಡು, ಮೂರು, ನಾಲ್ಕು ಎಂದು ಎಣಿಸಲು ಪ್ರಾರಂಭಿಸಿ. ಅಥವಾ ಯಾವುದಾದರೂ ಒಂದು ಶಬ್ಧವನ್ನು, ನುಡಿಗಟ್ಟನ್ನು ಅಥವಾ ಮಂತ್ರವನ್ನು ಪದೇ ಪದೇ ಹೇಳಲು ಪ್ರಾರಂಭಿಸಿ. ಒಬ್ಬ ದೇವರ ಅಥವಾ ನೀವು ಭಕ್ತಿತೋರುವ ಒಬ್ಬ ಸಂತನ ಹೆಸರನ್ನು ಜಪಿಸಿದರೆ ಇನ್ನೂ ಸುಲಭ. ನಿಮ್ಮ ಮನಸ್ಸು ಬೇರೆಡೆಗೆ ಹರಿಯುತ್ತದೆ. ಸ್ವಲ್ಪ ಮಟ್ಟಿಗೆ ನೀವು ನಕಾರಾತ್ಮಕತೆಯಿಂದ, ಕೋಪದಿಂದ ಹೊರಬರುತ್ತೀರಿ.

ಹಿಂದೆ ಈ ಪರಿಹಾರ ಸಹಾಯಕವಾಗಿತ್ತು; ಕೆಲಸ ಮಾಡಿತ್ತು. ಈಗಲೂ ಕೆಲಸ ಮಾಡುತ್ತದೆ. ಇದನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ತಳಮಳಗಳಿಂದ ಮುಕ್ತವಾದಂತೆನಿಸುತ್ತದೆ. ಆದರೆ ವಾಸ್ತವದಲ್ಲಿ ಈ ಪರಿಹಾರ ಎಚ್ಚರದ ಸ್ಥಿತಿಯಲ್ಲಿ ಮಾತ್ರ ಕೆಲಸ ಮಾಡುತ್ತದೆ. ಗಮನವನ್ನು ಬೇರೆಡೆಗೆ ಹರಿಸುವುದರಿಂದ ನಕಾರಾತ್ಮಕತೆ ಅಂತರ್ಮನದ ಆಳಕ್ಕೆ ಇಳಿಯುತ್ತದೆ ಮತ್ತು ಅಲ್ಲಿ ಆ ನಕಾರಾತ್ಮಕತೆಯನ್ನು ವ್ಯಕ್ತಿಯು ಬೆಳೆಸಿಕೊಳ್ಳುತ್ತಾ, ಹೆಚ್ಚುಮಾಡಿಕೊಳ್ಳುತ್ತಾ ಹೋಗುತ್ತಾನೆ. ಮೇಲ್ಪದರದಲ್ಲಿ ಶಾಂತಿ, ಸೌಹಾರ್ದತೆಯಿದೆ. ಆದರೆ ಅದುಮಿಟ್ಟಿರುವ ನಕಾರಾತ್ಮಕತೆ ಮನಸ್ಸಿನ ಆಳದಲ್ಲಿ ನಿದ್ರಿಸುತ್ತಿರುವ ಅಗ್ನಿಪರ್ವತದಂತೆ ಇದ್ದು ಆಗಿಂದಾಗ್ಗೆ ರಭಸವಾಗಿ ಸ್ಪೋಟಗೊಳ್ಳುತ್ತಿರುತ್ತದೆ.

ಆಂತರಿಕ ಸತ್ಯದ ಇತರೆ ಶೋಧಕರು, ಮನಸ್ಸು ಮತ್ತು ದೇಹದ ವಾಸ್ತವತೆಯನ್ನು ತಮ್ಮೊಳಗೆ ಪ್ರತ್ಯಕ್ಷವಾಗಿ ಅನುಭವಿಸುತ್ತಾ, ತಮ್ಮ ಹುಡುಕಾಟದಲ್ಲಿ ಇನ್ನೂ ಮುಂದೆ ಸಾಗಿದರು. ಗಮನವನ್ನು ಬೇರೆಡೆಗೆ ಹರಿಸುವುದು ಸಮಸ್ಯೆಯಿಂದ ಓಡಿ ಹೋದಂತೆಯೇ ಸರಿ ಎಂಬುದನ್ನು ಮನಗಂಡರು. ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದು ಪರಿಹಾರವಲ್ಲ. ಸಮಸ್ಯೆಯನ್ನು ಎದುರಿಸಬೇಕು. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಬಂದಾಗ, ಅದನ್ನೇ ಸುಮ್ಮನೆ ಗಮನಿಸು, ಎದುರಿಸು. ಯಾವಾಗ ವ್ಯಕ್ತಿಯು ಮನಸ್ಸಿನ ನಕಾರಾತ್ಮಕತೆಯನ್ನು ಗಮನಿಸಲು ಪ್ರಾರಂಭಿಸುತ್ತಾನೋ ಆಗ ಅದು ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ನಿಧಾನವಾಗಿ ಮುರುಟಿಹೋಗುತ್ತಾ ಮೂಲದಿಂದಲೇ ನಾಶವಾಗುತ್ತದೆ.

ಉತ್ತಮವಾದ ಪರಿಹಾರ. ಅದಿಮಿಡುವ ಅಥವಾ ಮನ ಬಂದಂತೆ ನಡೆದುಕೊಳ್ಳುವ ಪರವಾನಗೆ, ಈ ಎರಡೂ ಅತಿರೇಕಗಳನ್ನು ಇದರಿಂದ ತಪ್ಪಿಸಬಹುದು. ನಕಾರಾತ್ಮಕತೆಯನ್ನು ಸುಪ್ತ ಮನಸ್ಸಿನಲ್ಲಿಟ್ಟುಕೊಳ್ಳುವುದರಿಂದ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ, ಮತ್ತು ಅದನ್ನು ನಮ್ಮ ದೈಹಿಕ ಮತ್ತು ಮಾನಸಿಕ ಕ್ರಿಯೆಯಲ್ಲಿ ತೋರಿಸಿದರೆ ಹೆಚ್ಚಿನ ಸಮಸ್ಯೆಗಳೇ ಉಂಟಾಗುತ್ತವೆ. ಆದರೆ ಸುಮ್ಮನೆ ಗಮನಿಸಿದರೆ, ವಿಕಾರ ಹೊರಟು ಹೋಗುತ್ತದೆ, ನಕಾರಾತ್ಮಕತೆ ಮೂಲದಿಂದಲೇ ಹೊರಟುಹೋಗುತ್ತದೆ ; ವ್ಯಕ್ತಿಯು ವಿಕಾರದಿಂದ ಮುಕ್ತಿ ಪಡೆಯುತ್ತಾನೆ.

ಇದು ಅದ್ಭುತವಾಗಿದೆ ಎನಿಸುತ್ತದೆ. ಆದರೆ ಇದು ನಿಜವಾಗಿಯೂ ಸಾಧ್ಯವೇ? ನಮಗೆ ಕೋಪ ಬಂದಾಗ ಅದು ಎಷ್ಟು ಬೇಗ ನಮ್ಮನ್ನು ಆವರಿಸಿಕೊಂಡುಬಿಡುತ್ತದೆಯೆಂದರೆ , ಅದನ್ನು ನಾವು ಗಮನಿಸುವುದೇ ಇಲ್ಲ. ನಾವು ಕೋಪದ ಆವೇಶದಲ್ಲಿ ನಮಗೆ ಮತ್ತು ಇತರರಿಗೆ ಕೆಡುಕುಂಟಾಗುವಂಥ ಕೆಲಸಮಾಡುತ್ತೇವೆ. ಕೋಪ ಇಳಿದ ಮೇಲೆ, ಅಳುತ್ತೇವೆ ಮತ್ತು ಪಶ್ಚಾತ್ತಾಪಪಟ್ಟುಕೊಳ್ಳುತ್ತೇವೆ. "ಓ ನಾನು ತಪ್ಪು ಮಾಡಿದೆ, ದಯವಿಟ್ಟು ಕ್ಷಮಿಸಿ" ಎಂದು, ಆ ವ್ಯಕ್ತಿಯಿಂದ, ಈ ವ್ಯಕ್ತಿಯಿಂದ ಅಥವಾ ದೇವರಿಂದ ಕ್ಷಮೆಯಾಚಿಸುತ್ತೇವೆ. ಮುಂದಿನ ಸಾರಿ ಅಂತಹದ್ದೇ ಸಂದರ್ಭದಲ್ಲಿ ಅದೇ ರೀತಿ ಪ್ರತಿಕ್ರಿಯಿಸುತ್ತೇವೆ. ಈ ಪಶ್ಚಾತ್ತಾಪಪಟ್ಟುಕೊಂಡದ್ದೆಲ್ಲ ಏನೂ ಸಹಾಯ ಮಾಡುವುದಿಲ್ಲ.

ಕಷ್ಟ ಏನೆಂದರೆ, ದುರ್ಭಾವನೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಅದು ಅಂತರ್ಮನದ ಆಳದಿಂದ ಹುಟ್ಟುತ್ತದೆ ಮತ್ತು ಎಚ್ಚತ್ತ ಮನಸ್ಸನ್ನು ತಲುಪುವಷ್ಟೊತ್ತಿಗೆ ಎಷ್ಟೊಂದು ಶಕ್ತಿ ಪಡೆದುಕೊಳ್ಳುತ್ತದೆ ಎಂದರೆ ನಮ್ಮ ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತದೆ. ನಾವು ಅದನ್ನು ಗಮನಿಸುವುದು ಅಸಾಧ್ಯವಾಗುತ್ತದೆ.

ಹಾಗಾದರೆ ನಾನು ಒಬ್ಬ ಆಪ್ತ ಕಾರ್ಯದರ್ಶಿಯನ್ನು ನನ್ನ ಜೊತೆ ಇಟ್ಟುಕೊಳ್ಳಬೇಕು. ಯಾವಾಗ ನನಗೆ ಕೋಪ ಬರುತ್ತದೋ ಆಗ ಸೆಕ್ರಟರಿ ಎಚ್ಚರಿಸುತ್ತಾನೆ- "ನೋಡಿ ಸ್ವಾಮಿ, ಕೋಪ ಪ್ರಾರಂಭ ಆಗ್ತಾ ಇದೆ" ಅಂತ. ಈ ಕೋಪ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಆದ್ದರಿಂದ, ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಕೆಲಸ ಮಾಡಲು ಮೂರು ಜನ ಪ್ರೈವೇಟ್ ಸೆಕ್ರೆಟರಿಗಳು ಬೇಕಾಗುತ್ತಾರೆ. ಅದಕ್ಕೆ ನಾನು ಶಕ್ತನಾಗಿದ್ದೇನೆ. ನನಗೆ ಕೋಪ ಬರಲಾರಂಭಿಸಿದಾಗ ನನ್ನ ಆಪ್ತ ಕಾರ್ಯದರ್ಶಿ ತಕ್ಷಣ ನನ್ನನ್ನು ಎಚ್ಚರಿಸುತ್ತಾನೆ: 'ಓ ಸ್ವಾಮಿ, ನೋಡಿ ಕೋಪ ಪ್ರಾರಂಭ ಆಗಿದೆ" ಅಂತ. ಆಗ ನಾನು ಮಾಡುವ ಮೊದಲ ಕೆಲಸ ಅವನ ಮೇಲೆ ರೇಗುವುದು ಮತ್ತು "ಏ ಮೂರ್ಖ, ನನಗೆ ಬೋಧನೆ ಮಾಡುವುದಕ್ಕಾ ನಿನಗೆ ಸಂಬಳ ಕೊಡುತ್ತಿರುವುದು ? " ಎಂದು ಬೈಯುವುದು. ಕೋಪ ನನ್ನನ್ನು ಎಷ್ಟು ಆವರಿಸಿಕೊಳ್ಳುತ್ತದೆ ಎಂದರೆ, ಯಾವ ಒಳ್ಳೆಯ ಸಲಹೆಯೂ ಸಹಾಯಮಾಡುವುದಿಲ್ಲ.

ಒಂದು ಪಕ್ಷ ವಿವೇಕ ಕೆಲಸ ಮಾಡಿ, ನಾನು ಕಾರ್ಯದರ್ಶಿಗೆ ಬಯ್ಯಲಿಲ್ಲ, ಬದಲಾಗಿ "ನಿನಗೆ ತುಂಬಾ ಧನ್ಯವಾದಗಳು, ಈಗ ನಾನು ಕುಳಿತು ಕೋಪವನ್ನು ಗಮನಿಸಬೇಕು" ಎಂದು ಹೇಳುತ್ತೇನೆ ಎಂದಿಟ್ಟುಕೊಳ್ಳೋಣ. "ಅದು ಸಾಧ್ಯವೇ?" ನಾನು ಕಣ್ಣುಮುಚ್ಚಿ ಕುಳಿತು ಕೋಪವನ್ನು ಗಮನಿಸಲು ಪ್ರಾರಂಭಿಸಿದ ತಕ್ಷಣ ನನ್ನ ಕೋಪಕ್ಕೆ ಕಾರಣವಾದ ವಸ್ತು, ವ್ಯಕ್ತಿ ಅಥವಾ ಘಟನೆಗಳೇ ಮನಸ್ಸಿನ ಮುಂದೆ ಬರುತ್ತವೆ. ಆಗ ನಾನು ಕೋಪವನ್ನು ಗಮನಿಸುತ್ತಿಲ್ಲ. ನಿಜವಾಗಿ ನಾನು ನನ್ನ ಕೋಪದ ಪ್ರಚೋದನೆಯ ವಸ್ತು ಅಥವಾ ವ್ಯಕ್ತಿಯನ್ನು ಗಮನಿಸುತ್ತಿದ್ದೇನೆ. ಇದು ಕೋಪವನ್ನು ಇನ್ನೂ ಹೆಚ್ಚಾಗಿಸುತ್ತದೆ. ಇದು ಪರಿಹಾರವಲ್ಲ; ಕೋಪ ಉಂಟುಮಾಡಿದ ಹೊರಗಿನ ವಸ್ತುವಿನಿಂದ ಅಮೂರ್ತ ನಕಾರಾತ್ಮಕತೆಯನ್ನು, ಅಮೂರ್ತ ಉದ್ವೇಗವನ್ನು ಬೇರ್ಪಡಿಸಿ ಗಮನಿಸುವುದು ಬಹಳ ಕಷ್ಟ.

ಹೇಗಾದರೂ ಇರಲಿ , ಸಂಪೂರ್ಣ ಜ್ಞಾನೋದಯ ಹೊಂದಿ ಅಂತಿಮ ಸತ್ಯವನ್ನು ತಲುಪಿದ ವ್ಯಕ್ತಿಯು ನಿಜವಾದ ಪರಿಹಾರವನ್ನು ಹುಡುಕಿದರು. ಯಾವಾಗ ಮನಸ್ಸಿನಲ್ಲಿ ನಕಾರಾತ್ಮಕತೆ ಬರುತ್ತದೋ ಅದರ ಜೊತೆ ಜೊತೆಗೆ ದೇಹದ ಮಟ್ಟದಲ್ಲಿ ಎರಡು ಬದಲಾವಣೆಗಳು ಆಗುತ್ತವೆ ಎಂಬುದನ್ನು ಅವರು ಕಂಡುಹಿಡಿದರು. ಒಂದನೆಯದು, ಉಸಿರು ತನ್ನ ಸ್ವಾಭಾವಿಕ ಗತಿಯನ್ನು ಕಳೆದುಕೊಳ್ಳುತ್ತದೆ. ನಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆ ಬಂದಾಗ ನಾವು ಗಟ್ಟಿಯಾಗಿ ಉಸಿರಾಡಲು ಪ್ರಾರಂಭಿಸುತ್ತೇವೆ. ಇದು ಸ್ಥೂಲವಾದ್ದರಿಂದ ಇದನ್ನು ಗಮನಿಸುವುದು ಸುಲಭ. ಇದೇ ಸಮಯದಲ್ಲಿ ಅತಿ ಸೂಕ್ಷ್ಮ ಮಟ್ಟದಲ್ಲಿ, ಒಂದು ರೀತಿಯ ಜೀವರಸಾಯನಿಕ ಕ್ರಿಯೆ ಆರಂಭವಾಗಿ ಸಂವೇದನೆಯನ್ನು ಹುಟ್ಟಿಸುತ್ತದೆ. ಪ್ರತಿಯೊಂದು ಅಶುದ್ಧತೆಯೂ ಒಂದಿಲ್ಲೊಂದು ಸಂವೇದನೆಯನ್ನು, ದೇಹದ ಒಂದಿಲ್ಲೊಂದು ಭಾಗದಲ್ಲಿ ಉತ್ಪಾದಿಸುತ್ತದೆ.

ಇದು ಪ್ರಯೋಜನಕಾರಿ ಪರಿಹಾರ . ಮನಸ್ಸಿನ ಅಮೂರ್ತ ವಿಕಾರಗಳನ್ನು, ಅಮೂರ್ತ ಭಯ, ಕೋಪ, ಅಥವಾ ಭಾವೋದ್ವೇಗವನ್ನು ಸಾಮಾನ್ಯ ಮನುಷ್ಯ ಗಮನಿಸಲು ಸಾಧ್ಯವಾಗುವುದಿಲ್ಲ. ಆದರೆ ಸರಿಯಾದ ತರಬೇತಿ ಮತ್ತು ಸಾಧನೆಯಿಂದ ಬಹಳ ಸುಲಭವಾಗಿ ಉಸಿರಾಟ ಮತ್ತು ಸಂವೇದನೆಯನ್ನು ಗಮನಿಸಬಹುದು. ಇವೆರಡೂ ನೇರವಾಗಿ ಮನಸ್ಸಿನ ಮಲಿನತೆಗೆ (ಕಲ್ಮಶಕ್ಕೆ) ಸಂಬಂಧಿಸಿವೆ.

ಉಸಿರಾಟ ಮತ್ತು ಸಂವೇದನೆಗಳು ಎರಡು ರೀತಿಯಲ್ಲಿ ಸಹಾಯ ಮಾಡುತ್ತವೆ. ಮೊದಲನೆಯದಾಗಿ ಅವು ಆಪ್ತ ಕಾರ್ಯದರ್ಶಿಗಳಿದ್ದಂತೆ . ಮನಸ್ಸಿನಲ್ಲಿ ದುರ್ಭಾವನೆ ಪ್ರಾರಂಭವಾದ ತಕ್ಷಣ ಉಸಿರಾಟ ಅದರ ಗತಿಯನ್ನು ಕಳೆದುಕೊಳ್ಳುತ್ತದೆ. "ನೋಡು ಏನೋ ತಪ್ಪಾಗಿದೆ" ಎಂದು ಕೂಗಲು ಪ್ರಾರಂಭಿಸುತ್ತದೆ. ನಾವು ಉಸಿರಾಟಕ್ಕೆ ಹೊಡೆಯಲು ಸಾಧ್ಯವಿಲ್ಲ. ಈ ಎಚ್ಚರಿಕೆಯನ್ನು ನಾವು ಒಪ್ಪಿಕೊಳ್ಳಲೇಬೇಕು. ಅದೇ ರೀತಿ ಸಂವೇದನೆಗಳೂ "ಎನೋ ತಪ್ಪಾಗಿದೆ" ಎಂದು ಹೇಳುತ್ತವೆ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ಎಚ್ಚರಿಕೆ ಕೊಟ್ಟ ಮೇಲೆ ನಾವು ಉಸಿರಾಟವನ್ನು, ಸಂವೇದನೆಗಳನ್ನು ಗಮನಿಸಲು ಪ್ರಾರಂಭಿಸುತ್ತೇವೆ . ದುರ್ಭಾವನೆ ಬಹಳ ವೇಗವಾಗಿ ನಶಿಸಿಹೋಗುವುದನ್ನು ಕಂಡುಕೊಳ್ಳುತ್ತೇವೆ .

ಈ ಮನೋ-ದೈಹಿಕ ವಿದ್ಯಮಾನ ಎರಡು ಮುಖಗಳಿರುವ ನಾಣ್ಯದಂತೆ. ಮನಸ್ಸಿನಲ್ಲಿ ಬರುವ ಆಲೋಚನೆಗಳು ಅಥವಾ ಉದ್ವೇಗಗಳು ಒಂದು ಮುಖ. ಉಸಿರಾಟ ಮತ್ತು ದೇಹದ ಸಂವೇದನೆ ಇನ್ನೊಂದು ಮುಖ. ಯಾವುದೇ ಆಲೋಚನೆ ಅಥವಾ ಉದ್ವೇಗ (ಅರಿವಿಗೆ ಬರುವಂಥದ್ದು ಅಥವಾ ಬರದೆ ಇರುವಂಥದ್ದು), ಮನಸ್ಸಿನ ಯಾವುದೇ ದುರ್ಭಾವನೆ, ಆ ಕ್ಷಣದ ಉಸಿರಾಟ ಅಥವಾ ಸಂವೇದನೆಯಲ್ಲಿ ಪ್ರಕಟವಾಗುತ್ತದೆ. ಹಾಗಾಗಿ ಉಸಿರಾಟ ಅಥವಾ ಸಂವೇದನೆಯನ್ನು ಗಮನಿಸುತ್ತಾ, ವಾಸ್ತವವಾಗಿ ನಾವು ನಮ್ಮ ಮನಸ್ಸಿನ ದುರ್ಭಾವನೆಯನ್ನು ಗಮನಿಸುತ್ತೇವೆ . ಸಮಸ್ಯೆಯಿಂದ ಓಡಿ ಹೋಗುವ ಬದಲು, ನಾವು ಸತ್ಯವನ್ನು ಹೇಗಿದೆಯೋ ಹಾಗೆಯೇ ಎದುರಿಸುತ್ತೇವೆ. ಆಗ ದುರ್ಭಾವನೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಈ ಹಿಂದಿನಂತೆ ಇನ್ನು ಮುಂದೆ ಅದಕ್ಕೆ ನಮ್ಮಮೇಲೆ ಹಿಡಿತ ಸಾಧಿಸಲಾಗುವುದಿಲ್ಲ. ನಾವು ದೃಢವಾಗಿ ಮುಂದುವರಿದರೆ, ಕೊನೆಗೆ ದುರ್ಭಾವನೆ ಸಂಪೂರ್ಣವಾಗಿ ಹೊರಟುಹೋಗುತ್ತದೆ. ನಾವು ಶಾಂತಿ ಮತ್ತು ಸಂತೋಷದಿಂದ ಇರುತ್ತೇವೆ.

ಈ ರೀತಿ ತನ್ನನ್ನೇ ತಾನು ಗಮನಿಸುವ ಸಾಧನೆಯು , ಹೊರಗಿನ ಮತ್ತು ಒಳಗಿನ ಎರಡು ಸತ್ಯಗಳನ್ನು ತೋರಿಸುತ್ತದೆ. ಈ ಹಿಂದೆ, ನಾವು ಯಾವಾಗಲೂ ತೆರದ ಕಣ್ಣುಗಳಿಂದ ನೋಡುತ್ತಾ, ಒಳಗಿನ ಸತ್ಯವನ್ನು ಕಳೆದುಕೊಳ್ಳತ್ತಿದ್ದೆವು . ನಮ್ಮ ಅಸಂತೋಷಕ್ಕೆ ಕಾರಣವನ್ನು ನಾವು ಯಾವಾಗಲೂ ಹೊರಗೆ ಹುಡುಕುತ್ತಿದ್ದೆವು. ಹೊರಗಿನ ಸತ್ಯವನ್ನು ಶಪಿಸುತ್ತ, ಅದನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೆವು. ಆಂತರಿಕ (ಒಳಗಿನ) ಸತ್ಯದ ತಿಳುವಳಿಕೆ ಇಲ್ಲದ್ದರಿಂದ, ನಮ್ಮ ದುಃಖದ ಕಾರಣ ನಮ್ಮಲ್ಲಿಯೇ ಇದೆ, ನಮ್ಮ ಕುರುಡು ಪ್ರತಿಕ್ರಿಯೆಗಳಲ್ಲಿದೆ ಎಂಬುದನ್ನು ಯಾವಾಗಲೂ ಅರ್ಥಮಾಡಿಕೊಳ್ಳಲಿಲ್ಲ.

ಆದರೆ ಈಗ, ತರಬೇತಿಯಿಂದಾಗಿ, ನಾವು ನಾಣ್ಯದ ಇನ್ನೊಂದು ಮುಖವನ್ನು ನೋಡಬಲ್ಲೆವು . ನಮ್ಮ ಉಸಿರಾಟವನ್ನು ಮತ್ತು ನಮ್ಮೊಳಗೆ ಏನಾಗುತ್ತಿದೆ ಎಂಬುದನ್ನು ಅರಿಯಬಲ್ಲೆವು . ಅದು ಏನೇ ಆಗಲಿ, ಉಸಿರು ಅಥವಾ ಯಾವುದೇ ಸಂವೇದನೆ, ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೆ ಅದನ್ನು ಸುಮ್ಮನೆ ಗಮನಿಸುವುದನ್ನು ಕಲಿಯುತ್ತೇವೆ . ನಮ್ಮ ಕ್ಲೇಶಗಳನ್ನು ಹೆಚ್ಚು ಮಾಡಿಕೊಳ್ಳುವುದನ್ನು ನಿಲ್ಲಿಸುತ್ತೇವೆ. ಜೊತೆಗೆ, ನಕಾರಾತ್ಮಕತೆ ಪ್ರಕಟವಾಗಿ ನಶಿಸಿಹೋಗಲು ಅನುವುಮಾಡಿ ಕೊಡುತ್ತೇವೆ.

ಈ ಸಾಧನೆಯನ್ನು ಎಷ್ಟು ಹೆಚ್ಚು ಅಭ್ಯಾಸ ಮಾಡುತ್ತಾರೋ, ಅಷ್ಟು ಹೆಚ್ಚು ವೇಗವಾಗಿ ಹೇಗೆ ನಕರಾತ್ಮಕತೆಯಿಂದ ಬೇಗ ಹೊರಬರಬಹುದು ಎಂಬುದನ್ನು ಸಾಧಕರು ಕಂಡುಕೊಳ್ಳುತ್ತಾರೆ. ಕ್ರಮೇಣ ಮನಸ್ಸು ವಿಕಾರದಿಂದ ಮುಕ್ತವಾಗುತ್ತದೆ. ಅದು ಪರಿಶುದ್ಧವಾಗುತ್ತದೆ. ಪರಿಶುದ್ಧ ಮನಸ್ಸು ಯಾವಾಗಲೂ ಪ್ರೀತಿಯಿಂದ ತುಂಬಿರುತ್ತದೆ. ಇತರ ಎಲ್ಲರಲ್ಲೂ ನಿಷ್ಪಕ್ಷಪಾತ ಪ್ರೀತಿ; ಬೇರೆಯವರ ಸೋಲು ಮತ್ತು ನೋವುಗಳ ಬಗ್ಗೆ ಕರುಣೆ ತುಂಬಿರುತ್ತದೆ. ಬೇರೆಯವರ ಗೆಲವು ಮತ್ತು ಸಂತೋಷ ನಮ್ಮಲ್ಲಿ ಅತೀವ ಸಂತೋಷವನ್ನುಂಟುಮಾಡುತ್ತದೆ. ಯಾವುದೇ ಸಂದರ್ಭವಿರಲಿ ಸಮತೆಯೇ ತುಂಬಿರುತ್ತದೆ.

ಯಾವಾಗ ವ್ಯಕ್ತಿಯು ಈ ಹಂತವನ್ನು ತಲುಪುತ್ತಾನೋ, ಆಗ ಆ ವ್ಯಕ್ತಿಯ ಜೀವನಕ್ರಮ ಬದಲಾಗಲು ಪ್ರಾರಂಭಿಸುತ್ತದೆ. ತನ್ನ ದೇಹ ಅಥವಾ ಮಾತಿನಿಂದ ಇತರರ ಸುಖ ಶಾಂತಿಗೆ ಭಂಗ ತರುವಂಥಹ ಯಾವುದನ್ನೂ ಆ ವ್ಯಕ್ತಿ ಇನ್ನು ಮುಂದೆ ಮಾಡಲು ಸಾಧ್ಯವಿಲ್ಲ. ಬದಲಿಗೆ, ಸಮತೋಲನದ ಮನಸ್ಸು ತಾನಷ್ಟೇ ಶಾಂತಿಯಿಂದಿರುವುದಲ್ಲದೇ, ಇತರರೂ ಶಾಂತಿಯಿಂದಿರಲು ಸಹಾಯ ಮಾಡುತ್ತದೆ. ಆ ವ್ಯಕ್ತಿಯ ಸುತ್ತಮುತ್ತಲಿನ ವಾತಾವರಣವು ಶಾಂತಿ ಮತ್ತು ಸಾಮರಸ್ಯದಿಂದ ತುಂಬಿರುತ್ತದೆ, ಮತ್ತು ಇದು ಇತರರ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.

ತನ್ನೊಳಗೆ ಅನುಭವಕ್ಕೆ ಬರುವ ಪ್ರತಿಯೊಂದರ ಬಗೆಗೂ ಸಮಚಿತ್ತದಿಂದ ಇರುವುದನ್ನು ಕಲಿತು, ಹೊರಗಿನ ಸನ್ನಿವೇಶಗಳಲ್ಲಿ ಎದುರಾಗುವ ಎಲ್ಲದರ ಬಗ್ಗೆಯೂ ನಿರ್ಲಿಪ್ತತೆಯಿಂದ ಇರುವುದನ್ನು ವ್ಯಕ್ತಿಯು ಬೆಳೆಸಿಕೊಳ್ಳುತ್ತಾನೆ. ಆದರೆ ಈ ನಿರ್ಲಿಪ್ತತೆಯು ಪಲಾಯನವಲ್ಲ ಅಥವಾ ಪ್ರಪಂಚದ ಸಮಸ್ಯೆಗಳನ್ನು ನಿರ್ಲಕ್ಷಿಸುವುದಲ್ಲ. ಯಾರು ನಿಯಮಿತವಾಗಿ ವಿಪಶ್ಯನದ ಅಭ್ಯಾಸ ಮಾಡುತ್ತಾರೋ ಅವರು ಇತರರ ನೋವುಗಳಿಗೆ ಹೆಚ್ಚು ಸಂವೇದನಾಶೀಲರಾಗುತ್ತಾರೆ ಮತ್ತು ನೋವುಗಳನ್ನು ನಿವಾರಿಸಲು ತಮಗೆ ಸಾಧ್ಯವಾದುದೆಲ್ಲವನ್ನೂ ಮಾಡುತ್ತಾರೆ-- ಯಾವುದೇ ತಳಮಳದಿಂದಲ್ಲ, ಪ್ರೀತಿ, ಕರುಣೆ ಮತ್ತು ಸಮತೆ ತುಂಬಿದ ಮನಸ್ಸಿನಿಂದ ಮಾಡುತ್ತಾರೆ. ಅವರು ಪವಿತ್ರ ಅನಾಸಕ್ತಿಯನ್ನು ಕಲಿಯುತ್ತಾರೆ-- ಪೂರ್ಣ ಬದ್ಧತೆಯಿಂದ, ಸಂಪೂರ್ಣ ತೊಡಗಿಸಿಕೊಂಡು ಅದೇ ಸಮಯದಲ್ಲಿ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಂಡು ಇತರರಿಗೆ ಸಹಾಯ ಮಾಡುವುದು ಹೇಗೆ ಎಂಬುದು. ಈ ರೀತಿಯಾಗಿ ಅವರು ಇತರರ ಸುಖ ಶಾಂತಿಗಾಗಿ ಕೆಲಸ ಮಾಡುತ್ತಾ ತಾವೂ ಸುಖ ಶಾಂತಿಯಿಂದ ಇರುತ್ತಾರೆ.

ಇದನ್ನೇ ಭಗವಾನ್ ಬುದ್ಧರು ಬೋಧಿಸಿದ್ದು. ಇದೇ ಜೀವನ ಕಲೆ. ಅವರು ಯಾವುದೇ ಧರ್ಮವನ್ನು ಸ್ಥಾಪಿಸಲಿಲ್ಲ ಅಥವಾ ಯಾವುದೇ ಸಿದ್ಧಾಂತವನ್ನು ಬೋಧಿಸಲಿಲ್ಲ. ತಮ್ಮ ಅನುಯಾಯಿಗಳಿಗೆ ಯಾವುದೇ ಧಾರ್ಮಿಕ ವಿಧಿ ಅಥವಾ ಮತಾಚರಣೆಯನ್ನು ಅಥವಾ ಯಾವುದೇ ಅಂಧ ಅಥವಾ ಅರ್ಥಹೀನ ನಿಯಮಾನುಸರಣೆಯನ್ನು ಆಚರಿಸಲು ಸೂಚಿಸಲಿಲ್ಲ. ಬದಲಾಗಿ, ಆಂತರಿಕ ಸತ್ಯವನ್ನು ಗಮನಿಸುತ್ತಾ ವಸ್ತುವಿನ ಸಹಜ ಗುಣ ಹೇಗಿದೆಯೋ ಹಾಗೆ ಗಮನಿಸುವುದನ್ನು ಬೋಧಿಸಿದರು. ಅಜ್ಞಾನದಿಂದ ವ್ಯಕ್ತಿಯು ತನಗೆ ಮತ್ತು ಇತರರಿಗೆ ಹಾನಿಯಾಗುವ ಹಾಗೆ ಪ್ರತಿಕ್ರಿಯಿಸುತ್ತಾ ಇರುತ್ತಾನೆ. ಯಾವಾಗ ವಿವೇಕ, ಸತ್ಯ ಹೇಗಿದೆಯೋ ಹಾಗೆ ಗಮನಿಸುವ ಜ್ಞಾನ, ಬರುತ್ತದೋ ಆಗ ಕುರುಡು ಪ್ರತಿಕ್ರಿಯೆಯಿಂದ ಹೊರಬರುತ್ತಾನೆ. ಯಾವಾಗ ವ್ಯಕ್ತಿಯು ಕುರುಡು ಪ್ರತಿಕ್ರಿಯೆಯನ್ನ್ರು ನಿಲ್ಲಿಸುತ್ತಾನೋ ಆಗ ನಿಜವಾದ ಕ್ರಿಯೆ ಮಾಡಲು ಶಕ್ತನಾಗುತ್ತಾನೆ. ಸತ್ಯವನ್ನು ನೋಡುವುದರಿಂದ ಮತ್ತು ಅರ್ಥಮಾಡಿಕೊಳ್ಳುವುದರಿಂದ ಸಮತೋಲನದ ಮನಸ್ಸು, ಉದ್ಭವಿಸುತ್ತದೆ. ಸಕಾರಾತ್ಮಕ, ಸೃಜನಾತ್ಮಕವಾದ ಆ ಕ್ರಿಯೆ ತನಗೂ ಮತ್ತು ಇತರರಿಗೂ ಸಹಾಯಕವಾಗಿರಲು ಮಾತ್ರ ಸಾಧ್ಯ.

ಹಾಗಾದರೆ ಯಾವುದು ಅವಶ್ಯಕ? ತನ್ನನ್ನೇ ತಾನು ಅರಿಯುವುದು. ಇದನ್ನೇ ಪ್ರತಿಯೊಬ್ಬ ಜ್ಞಾನಿ ಹೇಳಿರುವುದು. ತನ್ನನ್ನು ತಾನು ಬುದ್ಧಿಯ ಮಟ್ಟದಲ್ಲಿ, ತತ್ವ ಸಿದ್ಧಾಂತಗಳ ಮಟ್ಟದಲ್ಲಿ ತಿಳಿಯುವುದಲ್ಲ. ಭಕ್ತಿಯ ಅಥವಾ ಭಾವನಾತ್ಮಕ ಮಟ್ಟದಲ್ಲಿ ತನ್ನನ್ನು ತಾನು ತಿಳಿಯುವುದೂ ಅಲ್ಲ; ಕೇಳಿದ್ದನ್ನು ಅಥವಾ ಓದಿದ್ದನ್ನು ಸುಮ್ಮನೆ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳವುದೂ ಅಲ್ಲ. ಆ ಜ್ಞಾನ ಸಾಲದು. ಇದಕ್ಕಿಂತ ಹೆಚ್ಚಾಗಿ, ವಾಸ್ತವಿಕ ಮಟ್ಟದಲ್ಲಿ ಸತ್ಯವನ್ನು ತಿಳಿಯಬೇಕು. ಈ ಮನೋದೈಹಿಕ ವಿದ್ಯಮಾನವನ್ನು ನೇರವಾಗಿ ಅನುಭವಿಸಬೇಕು. ಇದು ಮಾತ್ರವೇ ನಾವು ದುಃಖಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಒಳಗಿನ ಸತ್ಯವನ್ನು ತನ್ನಲ್ಲಿಯೇ ತಾನು ಪ್ರತ್ಯಕ್ಷವಾಗಿ ಅನುಭವಿಸುವ, ಸ್ವಯಂ - ವೀಕ್ಷಣೆಯ ಈ ಸಾಧನೆಯನ್ನು ವಿಪಶ್ಯನ ಧ್ಯಾನ ಎಂದು ಕರೆಯಲಾಗುತ್ತದೆ. ಬುದ್ಧರ ಕಾಲದ ಭಾರತದ ಭಾಷೆಯಲ್ಲಿ ‘ಪಸ್ಸನ' ಎಂದರೆ ನೋಡು, ಸಾಮಾನ್ಯ ರೀತಿಯಲ್ಲಿ ತೆರದ ಕಣ್ಣಿನಿಂದ ನೋಡು, ಎಂದರ್ಥ. ಆದರೆ, ವಿಪಶ್ಯನ ಎಂದರೆ ವಸ್ತು ಸ್ಥಿತಿಯನ್ನು ಅದು ಹೇಗಿದೆಯೋ ಹಾಗೆಯೇ ಗಮನಿಸುವುದು; ಅದು ಹೇಗೆ ತೋರುತ್ತದೆಯೋ ಹಾಗೆ ಅಲ್ಲ. ಇಡೀ ಮನಸ್ಸು ಮತ್ತು ದೇಹದ ವ್ಯವಸ್ಥೆಯ ಅಂತಿಮ ಸತ್ಯವನ್ನು ತಲುಪುವವರೆಗೂ ಮೇಲ್ನೋಟದ ಸತ್ಯವನ್ನು ಭೇದಿಸಿಕೊಂಡು ಹೋಗಬೇಕು. ಯಾವಾಗ ವ್ಯಕ್ತಿ ಈ ಅಂತಿಮ ಸತ್ಯವನ್ನು ಅನುಭವಕ್ಕೆ ತಂದುಕೊಳ್ಳುತ್ತಾನೋ ಆಗ ಕುರುಡು ಪ್ರತಿಕ್ರಿಯೆ ಮಾಡುವುದನ್ನು, ಮನಸ್ಸನ್ನು ಮಲಿನಗೊಳಿಸಿಕೊಳ್ಳುವುದನ್ನು ನಿಲ್ಲಿಸುತ್ತಾನೆ. ಹಳೆಯ ಮಲಿನತೆಗಳು ಸ್ವಾಭಾವಿಕವಾಗಿ ಕ್ರಮೇಣ ನಿರ್ಮೂಲವಾಗುತ್ತವೆ. ದುಃಖಗಳಿಂದ ಹೊರಬಂದು ಸಂತೋಷವನ್ನು ಅನುಭವಿಸುತ್ತಾನೆ.

ವಿಪಶ್ಯನ ಶಿಬಿರಗಳಲ್ಲಿ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಒಂದು, ಇತರರ ಶಾಂತಿ ಮತ್ತು ಸಾಮರಸ್ಯಕ್ಕೆ ಭಂಗತರುವಂತಹ ಯಾವುದೇ ದೈಹಿಕ ಅಥವಾ ಮಾತಿನ ಕ್ರಿಯೆಯನ್ನು ಮಾಡಕೂಡದು. ಮನಸ್ಸಿನ ಕಶ್ಮಲಗಳನ್ನು ಹೆಚ್ಚು ಮಾಡುವ ದೈಹಿಕ ಮತ್ತು ಮಾತಿನ ಕ್ರಿಯೆಗಳನ್ನು ಮಾಡುತ್ತಾ ವ್ಯಕ್ತಿ ತನ್ನನ್ನು ತಾನು ಮನಸ್ಸಿನ ಕಶ್ಮಲತೆಗಳಿಂದ ಮುಕ್ತಗೊಳಿಸಲು ಖಂಡಿತ ಸಾಧ್ಯವಿಲ್ಲ. ಸಾಧನೆಯ ಅತ್ಯಾವಶ್ಯಕ ಮೊದಲ ಹೆಜ್ಜೆ ನೀತಿ ಸಂಹಿತೆ. ಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ವ್ಯಭಿಚಾರ ಮಾಡದಿರುವ, ಸುಳ್ಳು ಹೇಳದಿರುವ ಮತ್ತು ಮಾದಕ ದ್ರವ್ಯ ಅಥವಾ ಮಾದಕ ವಸ್ತುಗಳನ್ನು ಸೇವನೆ ಮಾಡದಿರುವ ಪ್ರತಿಜ್ಞೆ ಕೈಗೊಳ್ಳುತ್ತಾನೆ. ಈ ಕ್ರಿಯೆಗಳನ್ನು ಮಾಡದಿರುವುದರಿಂದ ಮನಸ್ಸನ್ನು ಶಾಂತಗೊಳಿಸಿಕೊಳ್ಳುತ್ತಾನೆ.

ಮುಂದಿನ ಹೆಜ್ಜೆ, ಒಂದೇ ವಸ್ತುವಿನ ಮೇಲೆ ದೃಢವಾಗಿ ನಿಲ್ಲುವ ತರಬೇತಿ ನೀಡಿ ಈ ಲಂಗುಲಗಾಮಿಲ್ಲದ ಮನಸ್ಸಿನ ಮೇಲೆ ಯೋಗ್ಯ ಪ್ರಭುತ್ವ ಸಾಧಿಸುವುದು. ಆ ವಸ್ತುವೇ ನಮ್ಮ ‘ಉಸಿರು'. ಹೆಚ್ಚು ಹೊತ್ತು ಗಮನವನ್ನು ಉಸಿರಿನ ಮೇಲೆ ಇಡುವ ಪ್ರಯತ್ನ ಮಾಡುವುದು. ಇದು ಉಸಿರಿನ ವ್ಯಾಯಾಮವಲ್ಲ. ಉಸಿರನ್ನು ನಿಯಂತ್ರಿಸುವಂತಿಲ್ಲ . ಬದಲಾಗಿ, ಸ್ವಾಭಾವಿಕ ಉಸಿರನ್ನು ಅದು ಹೇಗಿದೆಯೋ ಹಾಗೆ, ಅದು ಹೇಗೆ ಒಳ ಬರುತ್ತಿದೆಯೋ ಹಾಗೆ, ಹೇಗೆ ಹೊರ ಹೋಗುತ್ತಿದೆಯೋ ಹಾಗೆಯೇ ಅದನ್ನು ವ್ಯಕ್ತಿಯು ಗಮನಿಸುತ್ತಾನೆ. ಈ ರೀತಿ ಮನಸ್ಸನ್ನು ಇನ್ನೂ ಹೆಚ್ಚು ಶಾಂತಗೊಳಿಸುತ್ತಾನೆ; ಹೀಗಾಗಿ ತೀವ್ರ ನಕಾರಾತ್ಮಕತೆಯು ಇನ್ನು ಮುಂದೆ ಮನಸ್ಸನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಮನಸ್ಸನ್ನು ಏಕಾಗ್ರಗೊಳಿಸುತ್ತಾ, ಅದನ್ನು ಮೊನಚಾಗಿ ಒಳನುಗ್ಗುವಂತೆ ಮಾಡುತ್ತಾ, ಅದು ಒಳನೋಟದ ಕೆಲಸ ಮಾಡಲು ಶಕ್ತವಾಗುತ್ತದೆ.

ಮೊದಲಿನ ಈ ಎರಡು ಹೆಜ್ಜೆಗಳು, ಶೀಲವಂತ ಜೀವನ ಮಾಡುವುದು ಮತ್ತು ಮನಸ್ಸನ್ನು ನಿಯಂತ್ರಿಸುವುದು, ಇವು ಅತ್ಯಾವಶ್ಯಕ ಮತ್ತು ಉಪಯುಕ್ತ. ಆದರೆ ತನ್ನ ಸ್ವಭಾವವನ್ನು ಅರಿಯುವ ಒಳನೋಟವನ್ನು ಬೆಳೆಸಿಕೊಂಡು ತನ್ನ ಮನಸ್ಸನ್ನು ಮಲಿನತೆಗಳಿಂದ ಶುದ್ಧಿಮಾಡುವ ಮೂರನೆ ಹೆಜ್ಜೆ ಇಡದಿದ್ದರೆ, ಮೊದಲನೆ ಎರಡು ಹೆಜ್ಜೆಗಳು ಮನಸ್ಸನ್ನು ಅದುಮಿಡುವುದಕ್ಕಷ್ಟೇ ಸೀಮಿತವಾಗುತ್ತವೆ. ಈ ಮೂರನೆ ಹೆಜ್ಜೆಯೇ, ನಿಜವಾಗಿ, ವಿಪಶ್ಯನ. ಇದು ತನ್ನಲ್ಲಿಯೇ ತಾನು ಸತ್ಯವನ್ನು ಅನುಭಾವಿಸುತ್ತಾ ಮನೋ-ದೈಹಿಕ ವಿದ್ಯಮಾನದಿಂದ ಪ್ರಕಟವಾಗುವ, ಯಾವಾಗಲೂ ಬದಲಾಗುತ್ತಿರುವ ಸಂವೇದನೆಗಳನ್ನು ವ್ಯವಸ್ಥಿತವಾಗಿ ಮತ್ತು ನಿರ್ಲಿಪ್ತವಾಗಿ ಗಮನಿಸುವುದು. ಸ್ವಯಂ ವೀಕ್ಷಣೆಯಿಂದ ಸ್ವ-ಶುದ್ಧಿ, ಇದು ಭಗವಾನ್ ಬುದ್ಧರ ಅತ್ಯಂತ ಶ್ರೇಷ್ಠವಾದ ಬೋಧನೆಯಾಗಿದೆ.

ಇದನ್ನು ಎಲ್ಲರೂ ಅಭ್ಯಾಸ ಮಾಡಬಹುದು. ಕಾಯಿಲೆ ಯಾವುದೇ ಪಂಥಕ್ಕೆ ಸೇರಿದ್ದಲ್ಲ. ಆದ್ದರಿಂದ ಔಷಧಿಯೂ ಯಾವುದೇ ಪಂಥಕ್ಕೆ ಸೇರಿರಬಾರದು. ಅದು ಸಾರ್ವತ್ರಿಕವಾಗಿರಬೇಕು. ಎಲ್ಲರೂ ನೋವನ್ನನುಭವಿಸುತ್ತಾರೆ. ಯಾರಾದರೂ ಕೋಪದಿಂದ ಕುದಿಯುತ್ತಿದ್ದರೆ, ಅದು ಬುದ್ಧ ಧರ್ಮೀಯರ ಕೋಪವಲ್ಲ; ಹಿಂದುಗಳದ್ದು, ಕಿಶ್ಚಿಯನ್ನರದ್ದು ಅಲ್ಲ. ಕೋಪ ಕೋಪವೇ. ಕೋಪದಿಂದ ಯಾರಾದರು ತಳಮಳಕ್ಕೊಳಗಾದರೆ, ಅದು ಕ್ರಿಶ್ಚಿಯನ್ನರ ತಳಮಳವಲ್ಲ ಅಥವಾ ಹಿಂದುಗಳ ಅಥವಾ ಬೌದ್ಧರ ತಳಮಳವಲ್ಲ. ಸಮಸ್ಯೆಯು ಸಾರ್ವತ್ರಿಕವಾಗಿರುವುದರಿಂದ, ಪರಿಹಾರವೂ ಖಂಡಿತವಾಗಿ ಸಾರ್ವತ್ರಿಕವಾಗಿರಬೇಕು.

ವಿಪಶ್ಯನವು ಅಂತಹ ಪರಿಹಾರ. ಶೀಲವಂತ ಜೀವನವನ್ನು ಯಾರೂ ವಿರೋಧಿಸುವುದಿಲ್ಲ. ಅದು ಇತರರ ಶಾಂತಿ-ಸಾಮರಸ್ಯವನ್ನು ಗೌರವಿಸುತ್ತದೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದನ್ನು ಯಾರೂ ವಿರೋಧಿಸುವುದಿಲ್ಲ. ತನ್ನ ಸತ್ಯವನ್ನು ತಾನು ತಿಳಿಯುವ ಒಳನೋಟವನ್ನು ಬೆಳೆಸಿಕೊಳ್ಳುವುದನ್ನು ಯಾರೂ ಆಕ್ಷೇಪಿಸುವುದಿಲ್ಲ. ಈ ಒಳನೋಟದಿಂದ ಮನಸ್ಸನ್ನು ನಕಾರಾತ್ಮಕತೆಯಿಂದ ಬಿಡುಗಡೆಗೊಳಿಸಲು ಸಾಧ್ಯವಿದೆ. ಇದು ಸಾರ್ವತ್ರಿಕ ಮಾರ್ಗ. ಇದು ಒಂದು ಪಂಥವಲ್ಲ. ಇದು ಒಂದು ವಿಚಾರಹೀನ ಕುರುಡು ನಂಬಿಕೆಯಲ್ಲ.

ವಾಸ್ತವ ಹೇಗಿದೆಯೋ ಹಾಗೆ ಗಮನಿಸುತ್ತಾ, ತನ್ನೊಳಗಿನ ಸತ್ಯವನ್ನು ಗಮನಿಸುತ್ತಾ, ತನ್ನನ್ನು ತಾನು ವಾಸ್ತವಿಕ, ಅನುಭವದ ಮಟ್ಟದಲ್ಲಿ ತಿಳಿಯುವುದು. ಸಾಧನೆ ಮಾಡುತ್ತಾ ವ್ಯಕ್ತಿಯು ವಿಕಾರಗಳ ದುಃಖದಿಂದ ಹೊರಬರಲು ಪ್ರಾರಂಭಿಸುತ್ತಾನೆ. ಮೇಲ್ಪದರದ ಸ್ಥೂಲ ಸತ್ಯಗಳಿಂದ, ದೇಹ ಮತ್ತು ಮನಸ್ಸಿನ ಅಂತಿಮ ಸತ್ಯದೆಡೆಗೆ ವ್ಯಕ್ತಿಯು ನುಗ್ಗುತ್ತಾನೆ. ಅದನ್ನು ಮೀರಿ, ದೇಹ ಮತ್ತು ಮನಸ್ಸಿನ ಆಚೆಗಿನ ಸತ್ಯವನ್ನು ಅನುಭವಿಸುತ್ತಾನೆ. ಈ ಸತ್ಯವು ಕಾಲಾತೀತ ಮತ್ತು ಸೀಮಾತೀತ. ಸಾಪೇಕ್ಷತೆಯ (ಹೋಲಿಕೆಯ) ನಿಯಮಗಳಿಗೆ ಒಳಪಟ್ಟ ಕ್ಷೇತ್ರವನ್ನು ಮೀರಿದ್ದು. ಎಲ್ಲಾ ವಿಕಾರಗಳಿಂದ, ಎಲ್ಲಾ ಕಲ್ಮಶಗಳಿಂದ, ಎಲ್ಲಾ ನೋವುಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆಯುವ ಸತ್ಯ. ಈ ಅಂತಿಮ ಸತ್ಯಕ್ಕೆ ಯಾರು ಏನೇ ಹೆಸರನ್ನು ಕೊಟ್ಟರೂ ಅದು ಅಪ್ರಸ್ತುತ. ಅದು ಎಲ್ಲರ ಅಂತಿಮ ಗುರಿ.

ನೀವೆಲ್ಲರೂ ಈ ಅಂತಿಮ ಸತ್ಯವನ್ನು ಅನುಭವಿಸಿ. ಎಲ್ಲಾ ಕಡೆಯ, ಎಲ್ಲಾ ಜನಗಳೂ ವಿಕಾರಗಳಿಂದ, ಅವರವರ ದುಃಖದಿಂದ ಹೊರಬರಲಿ. ನಿಜವಾದ ಸಂತೋಷವನ್ನು, ಶಾಂತಿಯನ್ನು, ಸಾಮರಸ್ಯವನ್ನು ಎಲ್ಲರೂ ಸವಿಯಲಿ.

ಎಲ್ಲರೂ ಸಂತೋಷದಿಂದಿರಲಿ