ಕೋಪ

ಜನವರಿ ೨೦೦೦ದಲ್ಲಿ ಸ್ವಿಟ್ಜರ್ಲ್ಯಾಂಡಿನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೋಪ ವಿಷಯದ ಬಗ್ಗೆ ಗೋಯಂಕಾಜಿಯವರು ಮಾಡಿದ ಭಾಷಣ:

ಯಾರಾದರೂ ಕೋಪಿಸಿಕೊಂಡಾಗ ಏನಾಗುತ್ತದೆ? ಪ್ರಕೃತಿಯ ನಿಯಮ ಹೇಗಿದೆ ಎಂದರೆ, ಕೋಪವನ್ನು ಉತ್ಪತ್ತಿ ಮಾಡಿಕೊಳ್ಳುವ ವ್ಯಕ್ತಿಯೇ ಅದರ ಮೊದಲ ಬಲಿಯಾಗುತ್ತಾನೆ. ವ್ಯಕ್ತಿಯು ಕೋಪವನ್ನು ಉತ್ಪತ್ತಿ ಮಾಡಿಕೊಂಡಾಗ ಖಂಡಿತವಾಗಿಯೂ ಅವನು ದುಃಖಿತನಾಗುತ್ತಾನೆ. ಆದರೆ ಕೋಪವನ್ನು ಉತ್ಪತ್ತಿ ಮಾಡಿಕೊಂಡು ತಮಗೆ ತಾವೇ ಹಾನಿಮಾಡಿಕೊಳ್ಳುತ್ತಾರೆ ಎಂಬುದನ್ನು ಜನರು ಅನೇಕ ವೇಳೆ ಅರ್ಥಮಾಡಿಕೊಳ್ಳುವುದಿಲ್ಲ. ಒಂದು ಪಕ್ಷ ಯಾರಾದರೂ ಇದನ್ನು ಅರ್ಥಮಾಡಿಕೊಂಡರೂ, ಸತ್ಯವೇನೆಂದರೆ, ಕೋಪದಿಂದ ತನ್ನನ್ನು ತಾನು ದೂರವಿಡಲು, ಕೋಪದಿಂದ ಮುಕ್ತನಾಗಲು, ಸಾಧ್ಯವಾಗುವುದಿಲ್ಲ. ವ್ಯಕ್ತಿಯು ಏಕೆ ಕೋಪಗೊಳ್ಳುತ್ತಾನೆ ಎಂಬುದನ್ನು ಈಗ ನೋಡೋಣ.

ಇಷ್ಟವಿಲ್ಲದಿರುವುದು ನಡೆದಾಗ, ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವಾಗ ಯಾರೋ ಒಬ್ಬರು ಅಡಚಣೆಯನ್ನುಂಟುಮಾಡಿದಾಗ, ಯಾರೋ ಒಬ್ಬರು ನಿಮ್ಮನ್ನು ಅವಮಾನಿಸಿದಾಗ ಅಥವಾ ಯಾರೋ ಒಬ್ಬರು ನಿಮ್ಮ ಬಗ್ಗೆ ಚಾಡಿ ಹೇಳುವಾಗ ನಿಮ್ಮ ಘನತೆಗೆ ಕುಂದುತರುವ ಮಾತನ್ನಾಡಿದ್ದರೆ, ನಿಸ್ಸಂಶಯವಾಗಿ ಕೋಪ ಬರುತ್ತದೆ. ಇಂತಹ ಎಲ್ಲಾ ಕಾರಣಗಳು ವ್ಯಕ್ತಿಯನ್ನು ತಕ್ಷಣ ಕೋಪಗೊಳ್ಳುವಂತೆ ಮಾಡುತ್ತವೆ. ಆದರೆ ಇವು ವ್ಯಕ್ತಿಯು ಕೋಪಗೊಳ್ಳಲು ಇರುವ ಮೇಲ್ನೋಟದ ಕಾರಣಗಳು. ತನ್ನ ವಿರುದ್ಧವಾಗಿ ಯಾರೂ ಏನನ್ನೂ ಹೇಳದಿರುವಂತೆ ಅಥವಾ ಏನನ್ನೂ ಮಾಡದಿರುವಂತೆ ನೋಡಿಕೊಳ್ಳುವ ಸಾಮರ್ಥ್ಯವನ್ನು ಯಾರಾದರೂ ಪಡೆಯಲು ಸಾಧ್ಯವೇ? ಖಂಡಿತವಾಗಿ ಸಾಧ್ಯವಿಲ್ಲ. ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗೂ ಇಷ್ಟವಿಲ್ಲದ ಘಟನೆಗಳು ನಡೆಯುತ್ತಿರುತ್ತವೆ ಮತ್ತು ಅವುಗಳನ್ನು ತಡೆಗಟ್ಟಲು ಅವನು ಅಥವಾ ಅವಳು ಅಸಹಾಯಕರಾಗಿರುತ್ತಾರೆ. ನಮಗೆ ಅವಮಾನ ಮಾಡದಿರುವಂತೆ ಅಥವಾ ನಮ್ಮ ವಿರುದ್ಧ ಏನನ್ನೂ ಹೇಳದಿರುವಂತೆ ನಾವು ಒಬ್ಬ ವ್ಯಕ್ತಿಯನ್ನು ತಡೆಯಬಹುದು. ಆದರೆ ಇನ್ನೊಬ್ಬ ವ್ಯಕ್ತಿಯು ಅದನ್ನು ಮಾಡುವುದಿಲ್ಲ ಎಂಬ ಖಾತರಿಯಿಲ್ಲ. ನಮ್ಮ ಇಷ್ಟಾನುಸಾರ ಇಡೀ ವಿಶ್ವವನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ; ಆದರೆ ಕೋಪ ಉತ್ಪತ್ತಿ ಮಾಡಿಕೊಳ್ಳುವುದರಿಂದ ಅನುಭವಿಸುವ ದುಃಖವನ್ನು ತೊಲಗಿಸಲು ನಮ್ಮನ್ನು ನಾವು ಖಂಡಿತವಾಗಿಯೂ ಬದಲಾಯಿಸಬಹುದು. ಇದಕ್ಕಾಗಿ ವ್ಯಕ್ತಿಯು, ಕೋಪದ ಗಹನವಾದ ಕಾರಣವನ್ನು ಹೊರಗಡೆ ಹುಡುಕುವ ಬದಲು ತನ್ನಲ್ಲಿಯೇ ಹುಡುಕಬೇಕು.

ಕೋಪ ಉತ್ಪತ್ತಿ ಮಾಡಿಕೊಳ್ಳುವುದಕ್ಕೆ ಇರುವ ನಿಜವಾದ ಕಾರಣವನ್ನು ನಾವು ಅರ್ಥಮಾಡಿಕೊಳ್ಳೋಣ. ಉದಾಹರಣೆಗೆ, ನಮ್ಮೊಳಗೆ ನಾವು ಕೋಪವನ್ನು ಅನುಭವಿಸುವಂತೆ ಮಾಡಿದ ನಿಜವಾದ ಕಾರಣವನ್ನು, ವಿಪಶ್ಯನದ ದೃಷ್ಟಿಯಿಂದ ಅರ್ಥಮಾಡಿಕೊಳ್ಳೋಣ. ನಿಮ್ಮೊಳಗಿನ ವಾಸ್ತವತೆಯನ್ನು ಗಮನಿಸುವ ಕಲೆಯನ್ನು ನೀವು ಕಲಿತರೆ, ಕೋಪದ ನಿಜವಾದ ಕಾರಣ ನಿಮ್ಮೊಳಗಿದೆ, ಹೊರಗಡೆಯಲ್ಲ ಎಂಬುದು ಅನುಭವದ ಮಟ್ಟದಲ್ಲಿ ನಿಮಗೆ ಬಹಳ ಸ್ಪಷ್ಟವಾಗುತ್ತದೆ.

ಇಷ್ಟವಾಗದ ಯಾವುದೋ ಒಂದು ಹೊರಗಿನ ಸಂಗತಿಯ ಸಂಪರ್ಕಕ್ಕೆ ವ್ಯಕ್ತಿಯು ಬಂದ ಕೂಡಲೇ ಶರೀರದಲ್ಲಿ ಒಂದು ಸಂವೇದನೆ ಉತ್ಪತ್ತಿಯಾಗುತ್ತದೆ. ಈ ಸಂಗತಿಯು ಇಷ್ಟವಾಗದೇ ಇರುವುದರಿಂದ, ಸಂವೇದನೆಯು ಬಹಳ ಅಹಿತಕರವಾಗಿರುತ್ತದೆ. ಈ ಅಹಿತಕರ ಸಂವೇದನೆಯನ್ನು ಅನುಭವಿಸಿದ ಮೇಲೆಯೇ ವ್ಯಕ್ತಿಯು ಕೋಪದಿಂದ ಪ್ರತಿಕ್ರಿಯಿಸುವುದು. ದೇಹದ ಸಂವೇದನೆಗಳಿಗೆ ಪ್ರತಿಕ್ರಿಯೆ ಮಾಡದೆ, ಅವುಗಳನ್ನು ಸಮತೆಯಿಂದ ಗಮನಿಸುವುದು ಹೇಗೆ ಎಂಬುದನ್ನು ವ್ಯಕ್ತಿಯು ಕಲಿತರೆ, ಹಠಾತ್ ಕೋಪಗೊಂಡು ತನಗೆ ತಾನೇ ಹಾನಿಮಾಡಿಕೊಳ್ಳುವ ಹಳೆಯ ಅಭ್ಯಾಸದಿಂದ ಹೊರಬರಲು ಪ್ರಾರಂಭಿಸುತ್ತಾನೆ. ದೇಹದ ವಿವಿಧ ಭಾಗಗಳಲ್ಲಿ ನಾನಾ ರೀತಿಯ ಸಂವೇದನೆಗಳನ್ನು ವ್ಯಕ್ತಿಯು ಅನುಭವಿಸುತ್ತಿರುತ್ತಾನೆ. ಈ ಎಲ್ಲಾ ಸಂವೇದನೆಗಳಿಗೆ ಪ್ರತಿಕ್ರಿಯೆ ಮಾಡದೆ ಅವುಗಳನ್ನು ಸಮತೆಯಿಂದ ಗಮನಿಸುವ ಸಹಜ ಶಕ್ತಿಯನ್ನು ಬೆಳಸಿಕೊಳ್ಳಲು ವಿಪಶ್ಯನವು ಅವನಿಗೆ ಸಹಾಯ ಮಾಡುತ್ತದೆ. ನಿಮ್ಮ ಹಳೆಯ ಅಭ್ಯಾಸ ಏನೆಂದರೆ, ನೀವು ಹಿತಕರ ಸಂವೇದನೆಗಳನ್ನು ಅನುಭವಿಸಿದಾಗ ಅವುಗಳಿಗೆ ರಾಗದಿಂದ ಮತ್ತು ಅಂಟಿಕೊಳ್ಳುವಿಕೆಯಿಂದ ಪ್ರತಿಕ್ರಿಯಿಸುವುದು, ಅಹಿತಕರ ಸಂವೇದನೆಗಳನ್ನು ಅನುಭವಿಸಿದಾಗ ಅವುಗಳಿಗೆ ಕೋಪ ಮತ್ತು ದ್ವೇಷದಿಂದ ಪ್ರತಿಕ್ರಿಯಿಸುವುದು. ಪ್ರತಿಯೊಂದು ಸಂವೇದನೆಯನ್ನೂ, ಹಿತಕರ ಮತ್ತು ಅಹಿತಕರ ಎರಡನ್ನೂ, ವಸ್ತುನಿಷ್ಠವಾಗಿ ಗಮನಿಸುತ್ತಾ, ಪ್ರತಿಯೊಂದು ಸಂವೇದನೆಯೂ ಉದಯವಾಗುವ ಮತ್ತು ವ್ಯಯವಾಗುವ ಗುಣವನ್ನು ಹೊಂದಿದೆ,ಯಾವ ಸಂವೇದನೆಯೂ ನಿರಂತರವಾಗಿ ಇರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡು ಸಮತೆಯಿಂದಿರುವುದನ್ನು ವಿಪಶ್ಯನವು ನಿಮಗೆ ಕಲಿಸುತ್ತದೆ. .

ಮತ್ತೆ ಮತ್ತೆ ಸಮತೆಯಿಂದ ಸಂವೇದನೆಯನ್ನು ಗಮನಿಸುವುದನ್ನು ಅಭ್ಯಾಸ ಮಾಡುತ್ತಾ, ಈ ಸಂವೇದನೆಗಳಿಗೆ ಥಟ್ಟನೆ ಕುರುಡು ಪ್ರತಿಕ್ರಿಯೆ ಮಾಡುವ ಸ್ವಭಾವವನ್ನು ವ್ಯಕ್ತಿಯು ಬದಲಾಯಿಸುತ್ತಾನೆ. ಹೀಗೆ, ನಿತ್ಯದ ಜೀವನದಲ್ಲಿ ಯಾವುದಾದರೂ ಇಷ್ಟವಿಲ್ಲದ ಘಟನೆ ನಡೆದಾಗ, ದೇಹದ ಮೇಲೆ ಅಹಿತಕರ ಸಂವೇದನೆ ಬಂದಿರುವುದನ್ನು ವ್ಯಕ್ತಿಯು ಅರಿಯುತ್ತಾನೆ ಮತ್ತು ಈ ಹಿಂದಿನಂತೆ ಕೋಪದಿಂದ ಸ್ಫೋಟಗೊಳ್ಳದೆ ಅದನ್ನು ಗಮನಿಸಲು ಪ್ರಾರಂಭಿಸುತ್ತಾನೆ. ವ್ಯಕ್ತಿಯು ಕೋಪದಿಂದ ಸಂಪೂರ್ಣ ಮುಕ್ತನಾಗುವ ಹಂತ ತಲುಪಲು, ನಿಸ್ಸಂಶಯವಾಗಿ, ಸಮಯ ತೆಗೆದುಕೊಳ್ಳುತ್ತದೆ. ಆದರೆ ವ್ಯಕ್ತಿಯು, ಹೆಚ್ಚು ಹೆಚ್ಚು ವಿಪಶ್ಯನದ ಅಭ್ಯಾಸ ಮಾಡಿದಂತೆ, ಕೋಪದಲ್ಲಿ ಕುದಿಯುವ ಅವಧಿಯು ಕಡಿಮೆಯಾಗುತ್ತಾ ಬರುವುದನ್ನು ಗ್ರಹಿಸುತ್ತಾನೆ. ಸಂವೇದನೆಯು ಬಂದ ತಕ್ಷಣವೇ ಅದನ್ನು ಅರಿಯಲು ವ್ಯಕ್ತಿಗೆ ಸಾಧ್ಯವಾಗದಿದ್ದರೂ, ಬಹುಶಃ ಕೆಲವು ನಿಮಿಷಗಳ ನಂತರ, ಕೋಪದ ಕುರುಡು ಪ್ರತಿಕ್ರಿಯೆಯಿಂದ ಅವನು ಅಹಿತಕರ ಸಂವೇದನೆಗಳನ್ನು ಇನ್ನೂ ಹೆಚ್ಚು ತೀವ್ರ ಮಾಡಿಕೊಂಡು ತನ್ನನ್ನು ತಾನು ಇನ್ನೂ ಹೆಚ್ಚು ದುಃಖಿತನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂಬುದನ್ನು ಅರಿಯಲು ಪ್ರಾರಂಭಿಸುತ್ತಾನೆ. ವ್ಯಕ್ತಿಯು ಈ ಸತ್ಯವನ್ನು ಅರಿತ ಕೂಡಲೇ, ಕೋಪದಿಂದ ಹೊರಬರಲು ಪ್ರಾರಂಭಿಸುತ್ತಾನೆ. ವಿಪಶ್ಯನದ ಅಭ್ಯಾಸದಿಂದ, ಅಹಿತಕರ ಸಂವೇದನೆಗೆ ಸಂಬಂಧಿಸಿದ ದುಃಖವನ್ನು ಅನುಭವಿಸುವ ಅವಧಿಯು ಕಡಿಮೆಯಾಗುತ್ತಾ ಬರುತ್ತದೆ ಮತ್ತು ಕೋಪವನ್ನು ಉತ್ಪತ್ತಿ ಮಾಡಿಕೊಂಡು ತನಗೆ ತಾನೇ ಹಾನಿಮಾಡಿಕೊಳ್ಳುವ ಸತ್ಯವನ್ನು ತತ್‌ಕ್ಷಣವೇ ವ್ಯಕ್ತಿಯು ಮನಗಾಣುವ ಕಾಲ ಬರುತ್ತದೆ. ಕೋಪದಿಂದ ಪ್ರತಿಕ್ರಿಯೆ ಮಾಡುವ ಈ ಹುಚ್ಚು ಸ್ವಭಾವದಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳಲು ಇರುವುದು ಇದೊಂದೇ ಮಾರ್ಗ.

ನಿಸ್ಸಂದೇಹವಾಗಿ ಇನ್ನೊಂದು ದಾರಿಯೂ ಇದೆ. ಕೋಪ ಉತ್ಪತ್ತಿ ಮಾಡಿಕೊಂಡಿದ್ದಾನೆ ಎಂಬುದನ್ನು ವ್ಯಕ್ತಿಯು ಅರಿತ ಕೂಡಲೆ, ಅವನು ತನ್ನ ಗಮನವನ್ನು ಬೇರೊಂದು ವಸ್ತುವಿನ ಕಡೆಗೆ ತಿರುಗಿಸಬಹುದು. ಈ ವಿಧಾನದಿಂದ ತಾನು ಕೋಪದಿಂದ ಹೊರಬರುತ್ತಿದ್ದೇನೆ ಎಂದು ಅವನಿಗೆ ಅನಿಸಬಹುದು. ಆದರೆ, ವಾಸ್ತವವಾಗಿ ದುಃಖದಿಂದ ಹೊರಬರುವುದು ಮೇಲ್ಪದರದ ಮನಸ್ಸು ಮಾತ್ರ. ಅಂತರಾಳದಲ್ಲಿ ವ್ಯಕ್ತಿಯು ಕೋಪದಿಂದ ಕುದಿಯುತ್ತಿರುತ್ತಾನೆ, ಏಕೆಂದರೆ ವ್ಯಕ್ತಿಯು ಕೋಪವನ್ನು ನಿರ್ಮೂಲ ಮಾಡಿಲ್ಲ, ಕೇವಲ ಅದನ್ನು ದಮನ ಮಾಡಿದ್ದಾನೆ . ವಾಸ್ತವತೆಯಿಂದ ಓಡಿ ಹೋಗುವ ಬದಲು, ಮನಸ್ಸಿನಲ್ಲಿರುವ ಕೋಪವನ್ನು ಮತ್ತು ದೇಹದಲ್ಲಿರುವ ಅಹಿತಕರ ಸಂವೇದನೆಯನ್ನು ವಸ್ತುನಿಷ್ಠವಾಗಿ ಗಮನಿಸುತ್ತಾ ವಾಸ್ತವತೆಯನ್ನು ಎದುರಿಸುವುದನ್ನು ವಿಪಶ್ಯನವು ನಿಮಗೆ ಕಲಿಸುತ್ತದೆ. ದೇಹದಲ್ಲಿನ ಅಹಿತಕರ ಸಂವೇದನೆಗಳ ವಾಸ್ತವತೆಯನ್ನು ಗಮನಿಸುವುದರಿಂದ, ನೀವು ನಿಮ್ಮ ಗಮನವನ್ನು ಬೇರೊಂದು ಕಡೆಗೆ ತಿರುಗಿಸುತ್ತಿಲ್ಲ ಮತ್ತು ನೀವು ನಿಮ್ಮ ಕೋಪವನ್ನು ಮನಸ್ಸಿನ ಆಳದಲ್ಲಿ ಅದುಮಿಡುವುದೂ ಇಲ್ಲ. ಸಂವೇದನೆಗಳನ್ನು ಸಮತೆಯಿಂದ ಗಮನಿಸುವುದನ್ನು ನೀವು ಮುಂದುವರಿಸಿದಂತೆ, ಬಂದಿರುವ ಕೋಪವು ಸಹಜವಾಗಿ ದುರ್ಬಲವಾಗುತ್ತಾ, ದುರ್ಬಲವಾಗುತ್ತಾ ಅಂತಿಮವಾಗಿ ಹೊರಟು ಹೋಗುವುದನ್ನು ನೀವು ಕಾಣುತ್ತೀರಿ.

ಸತ್ಯಸಂಗತಿ ಎಂದರೆ, ಮನಸ್ಸಿನ ಅತಿ ಚಿಕ್ಕ ಭಾಗ ಅಂದರೆ ಮೇಲ್ಭಾಗದ ಮನಸ್ಸು(ಜಾಗೃತ ಮನಸ್ಸು) ಮತ್ತು ಸುಪ್ತಮನಸ್ಸು ಅಥವಾ ಅರ್ಧ ಜಾಗೃತ ಮನಸ್ಸು ಎಂದು ಕರೆಯುವ ಮನಸ್ಸಿನ ಅತಿ ದೊಡ್ಡ ಭಾಗದ ಮಧ್ಯೆ ಒಂದು ಅಡ್ಡಗೋಡೆಯಿದೆ. ಮನಸ್ಸಿನ ಈ ದೊಡ್ಡ ಭಾಗವು, ಅತ್ಯಂತ ಆಳದಲ್ಲಿ ದೇಹದ ಸಂವೇದನೆಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಮತ್ತು ಸಂವೇದನೆಗಳಿಗೆ ಕುರುಡು ಪ್ರತಿಕ್ರಿಯೆ ಮಾಡುವ ಚಟಕ್ಕೆ ಬಲಿಯಾಗಿದೆ. ದೇಹದ ತುಂಬಾ ಒಂದಿಲ್ಲೊಂದು ಕಾರಣಕ್ಕೆ, ಪ್ರತಿ ಕ್ಷಣವೂ ನಾನಾ ಬಗೆಯ ಸಂವೇದನೆಗಳು ಉದಯವಾಗುತ್ತಿರುತ್ತವೆ. ಸಂವೇದನೆಯು ಹಿತಕರವಾಗಿದ್ದರೆ, ಅದಕ್ಕೆ ರಾಗದಿಂದ ಪ್ರತಿಕ್ರಿಯಿಸುವುದು ಮತ್ತು ಅದಕ್ಕೆ ಅಂಟಿಕೊಳ್ಳುವುದು ಮನಸ್ಸಿನ ಸ್ವಭಾವವಾಗಿದೆ. ಸಂವೇದನೆಯು ಅಹಿತಕರವಾಗಿದ್ದರೆ, ದ್ವೇಷ ಮತ್ತು ವೈರದಿಂದ ಪ್ರತಿಕ್ರಿಯಿಸುವುದು ಅದರ ಚಾಳಿಯಾಗಿದೆ. ಮೇಲ್ಮ್ ನಸ್ಸಿನ ಚಿಕ್ಕ ಭಾಗ ಅಂದರೆ ಜಾಗೃತ ಮನಸ್ಸು ಮತ್ತು ಮನಸ್ಸಿನ ಉಳಿದ ಭಾಗದ ಅಂದರೆ ಸುಪ್ತ ಮನಸ್ಸು ಇವುಗಳ ಮಧ್ಯೆ ಅಡ್ಡಗೋಡೆ ಇರುವುದರಿಂದ, ಈ ಪ್ರತಿಕ್ರಿಯೆಯು ಮನಸ್ಸಿನ ಆಳದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ ಎಂಬ ಸತ್ಯಸಂಗತಿಯ ಅರಿವು ಮೇಲ್ಭಾಗದ ಮನಸ್ಸಿಗೆ ಸ್ವಲ್ಪವೂ ಇರುವುದಿಲ್ಲ. ಈ ಅಡ್ಡಗೋಡೆಯನ್ನು ಒಡೆದು ಹಾಕಲು ವಿಪಶ್ಯನವು ಸಹಾಯ ಮಾಡುತ್ತದೆ ಮತ್ತು ಮನಸ್ಸಿನ ಇಡೀ ರಚನೆ ಬಹಳ ಜಾಗೃತವಾಗುತ್ತದೆ. ಪ್ರತಿ ಕ್ಷಣವೂ ಅದು ಸಂವೇದನೆಯನ್ನು ಅರಿಯುತ್ತಿರುತ್ತದೆ ಮತ್ತು, ಅಶಾಶ್ವತ (ಅನಿಚ್ಚ) ನಿಯಮದ ತಿಳುವಳಿಕೆಯಿಂದ ಸಮತೆಯಿಂದಿರುತ್ತದೆ. ಬೌದ್ಧಿಕ ಮಟ್ಟದ ತಿಳುವಳಿಕೆಯಿಂದ ಮೇಲ್ಮಟ್ಟದ ಮನಸ್ಸನ್ನು ಸಮತೆಯಿಂದ ಇರುವಂತೆ ತರಬೇತಿಗೊಳಿಸುವುದು ಸುಲಭ. ಆದರೆ ಈ ಅಡ್ಡಗೋಡೆಯ ಕಾರಣದಿಂದ, ಬೌದ್ಧಿಕ ತಿಳುವಳಿಕೆಯ ಈ ಸಂದೇಶವು ಮನಸ್ಸಿನ ಆಳಕ್ಕೆ ತಲುಪುವುದಿಲ್ಲ. ವಿಪಶ್ಯನವು ಈ ತಡೆಯನ್ನು ಬೀಳಿಸಿದಾಗ, ಇಡೀ ಮನಸ್ಸು ಅಶಾಶ್ವತತೆಯ ನಿಯಮವನ್ನು ಅರ್ಥಮಾಡಿಕೊಳ್ಳುತ್ತಿರುತ್ತದೆ, ಆಳದ ಮಟ್ಟದಲ್ಲಿನ ಕುರುಡು ಪ್ರತಿಕ್ರಿಯೆ ಮಾಡುವ ಸ್ವಭಾವವು ಬದಲಾಗಲು ಪ್ರಾರಂಭಿಸುತ್ತದೆ. ಕೋಪದ ದುಃಖದಿಂದ ನಿಮ್ಮನ್ನು ನೀವು ಬಿಡುಗಡೆಗೊಳಿಸಿಕೊಳ್ಳಲು ಇದೇ ಅತ್ಯುತ್ತಮ ಮಾರ್ಗ.